ಮಿರಿಡೀ -
ಹೆಮಿಪ್ಟರ ಗಣದ ಹೆಟರಾಪ್ಟರ ಉಪಗಣಕ್ಕೆ ಸೇರಿದ ಕೀಟಕುಟುಂಬ. ಉಪಗಣಕ್ಕೆ ಸೇರಿದ 43 ಕುಟುಂಬಗಳ ಪೈಕಿ ಇದೇ ಅತ್ಯಂತ ದೊಡ್ಡದಾಗಿದ್ದು ಸುಮಾರು 600 ಜಾತಿಗಳ 5,000 ಪ್ರಭೇದಗಳನ್ನು ಒಳಗೊಂಡಿದೆ. ಇದನ್ನು ಕ್ಯಾಪ್ಸಿಡೀ ಎಂದು ಕೂಡ ಹೆಸರಿಸುವುದಿದೆ. ಇದಕ್ಕೆ ಸೇರಿದ ಕೀಟಗಳನ್ನು ಗಿಡತಿಗಣೆ ಅಥವಾ ಎಲೆ ತಿಗಣೆ ಎಂದು ಕರೆಯುವುದುಂಟು. ಮೃದುಚರ್ಮದ ದೇಹ ಅಸಿಲಸ್ ಇಲ್ಲದಿರುವುದು, ದೇಹಕ್ಕಿಂತ ದೊಡ್ಡಗಾತ್ರದ ಎಲಿಟ್ರರೆಕ್ಕೆಗಳು, ನಾಲ್ಕು ಖಂಡಗಳಿಂದ ರಚಿತವಾದ ಸ್ಪರ್ಶಾಂಗಗಳು, ತೆಳುವಾದ ಕಾಲುಗಳು, ನಯವಾದ ಹಾಗೂ ತ್ರಿಕೋನಾಕಾರದ ಸ್ಕುಟೆಲಮ್-ಇವು ಈ ತಿಗಣೆಗಳ ಪ್ರಮುಖ ಲಕ್ಷಣಗಳು.

	ಬಹುತೇಕ ಪ್ರಭೇದಗಳು ಸಸ್ಯಾಹಾರಿಗಳು.  ಬೇರೆ ಕೀಟಗಳನ್ನು ತಿಂದುಜೀವಿಸುವ ಕೆಲವು ಬಗೆಗಳೂ ಉಂಟು.  ಮತ್ತೆ ಕೆಲವು ಸಸ್ಯ ಪ್ರಾಣಿಗಳೆರಡನ್ನೂ ತಿನ್ನುವಂಥವು. ಸಾಲ್‍ಬರ್ಜೆಲ ಸಿಂಗ್ಯುಲೇರಿಸ್ ಎಂಬುದು ಪಶ್ಚಿಮ ಆಫ್ರಿಕದ ಕೋಕೊ ಗಿಡಗಳನ್ನು ತಿಂದು ಹಾಳು ಮಾಡಿದರೆ ಕಿಯಾಂಬುರ ಕಾಫಿಯೇ ಎಂಬುದು ಪೂರ್ವಆಫ್ರಿಕದಲ್ಲಿ ಕಾಫಿಗಿಡಗಳಿಗೆ ಉಪದ್ರವವನ್ನುಂಟು ಮಾಡುತ್ತದೆ. ಯೂರೋಪಿನಲ್ಲಿ ಹಣ್ಣಿನಗಿಡಗಳ ಮೇಲೆ ಕ್ಯಾಲೋಕೋರಿಸ್ ಫಲ್ವೊಮ್ಯಾಕ್ಯುಲೇಟಸ್ ಎಂಬ ತಿಗಣೆ ವಾಸಿಸುತ್ತದೆ. ಹೆಲೊ ಪೆಲ್ಟಿಸ್ ಜಾತಿಯವು ಭಾರತ, ಶ್ರೀಲಂಕಾ, ಮಲೇಷ್ಯ, ಆಫ್ರಿಕಗಳಲ್ಲಿ ಕ್ವಿನೀನು ಮರಗಳನ್ನು ಪೀಡಿಸುತ್ತವೆ. ಇವುಗಳ ಪೈಕಿ ಹೆಲೊಪೆಲ್ಟಿಸ್ ತಿವೋರು ಎಂಬುದು ಅಸ್ಸಾಮಿನ ಟೀ ತೋಟಗಳಲ್ಲಿ ಹೇರಳವಾಗಿದೆ. ಟೀ ಸೊಳ್ಳೆ ಎಂದೇ ಇದನ್ನು ಕರೆಯಲಾಗುತ್ತದೆ. ಕರ್ನಾಟಕದಲ್ಲಿ ಮಹಾಗನಿ, ಬೇವು, ಟೀ, ಕೋಕೊ, ಸಿಂಕೋನ ಮರಗಳ ಮೇಲೆ ಹೆಲೊಪೆಲ್ಟಿಸ್ ಅಂಟೊನಿಯೈ ಎಂಬ ಹಾನಿಕಾರಕ ತಿಗಣೆ ಕಂಡುಬರುತ್ತದೆ. ಅಂತೆಯೇ ಡಿಸ್‍ಫಿಂಕ್ಟಸ್ ಪಾಲಿಟನ್ ಎಂಬುದು ವೀಳೆಯದೆಲೆ ಬಳ್ಳಿಗಳ ಮೇಲೂ ಕ್ಯಾಲೊಕೋರಿಸ್ ಆಂಗುಸ್ಟ್ರೇಟಸ್ ಜೋಳ ಮತ್ತು ಮುಸುಕಿನ ಜೋಳಗಳ ಮೇಲೂ ಗ್ಯಾಲೊಬೆಲಿಕಸ್ ಕ್ರಾಸಿಯೊಕೋರಿಸ್ ತಂಬಾಕು ಗಿಡಗಳ ಮೇಲೂ ಜೀವಿಸಿ ಬೆಳೆಯನ್ನು ಹಾಳುಮಾಡುವುವು.

	ಮಿರಿಡೀ ಕುಟುಂಬದ ಪರಭಕ್ಷಿ ತಿಗಣೆಗಳ ಪೈಕಿ ಯೂರೋಪಿನ ಡೆರಿಯೊ ಕೋರಿಸ್ ರೂಬರ್ ಎಂಬುದು ಏಫಿಡ್ ಕೀಟಗಳನ್ನು ತಿಂದು ಅವನ್ನು ನಿಯಂತ್ರಿಸುತ್ತದೆ. ಸಿರ್ಟೊರೈನಸ್ ಮುಂಡಲಸ್ ಕಬ್ಬಿನ ಬೆಳೆಗೆ ಬೀಳುವ ಮಿಡತೆಗಳನ್ನು ತಿಂದು ಉಪಕಾರವೆಸಗುತ್ತದೆ. ಅಂತೆಯೇ ಮ್ಯಾಲಗ್ಯಾಸೀ ದ್ವೀಪದಲ್ಲಿ ಕಾಣದೊರೆಯುವ ಲಿಸೊಕ್ಯಾಪ್ಸಸ್ ವಾಸ್‍ಮ್ಯಾನಿಯೈ ಎಂಬುದು ಕ್ರೆಮಟೋಗ್ಯಾಸ್ಟರ್ ಕೀಟಗಳನ್ನು ತಿಂದು ಜೀವಿಸುತ್ತದೆ.
(ಜೆ.ವಿ.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ